ನೀರುಗುಳ್ಳೆ -
	ಮಾಲಸ್ಕ (ಮೃದ್ವಂಗಿ) ವಿಭಾಗದ ಗ್ಯಾಸ್ಟ್ರಾಪೊಡ ವರ್ಗಕ್ಕೆ ಸೇರಿದ ಒಂದು ತೆರನ ಬಸವನ ಹುಳು (ವಾಟರ್ ಸ್ನೇಲ್). ಸೇಬು ಬಸವನ ಹುಳು (ಆಪಲ್ ಸ್ನೇಲ್) ಪರ್ಯಾಯನಾಮ. ಮೃದ್ವಂಗಿಗಳ ಸಾಮಾನ್ಯ ರಚನೆಯನ್ನು ವಿವರಿಸಲು ಇದು ಉತ್ತಮ ಉದಾಹರಣೆ. ಇದರ ದೇಹ ಒಂದೇ ಚೂರಿನಿಂದುಂಟಾದ ದೊಡ್ಡ ಚಿಪ್ಪಿನೊಳಗೆ (ಶಂಖ) ಅಡಗಿದೆ. ಸುರುಳಿಯಂತಿರುವ ಈ ಶಂಖ ಬಲಕ್ಕೆ ಸುತ್ತಿಕೊಂಡಿದೆ. ಶಂಖಕ್ಕೆ ದೊಡ್ಡ ಬಾಯೂ ಅದನ್ನು ಮುಚ್ಚಲು ಚಿಪ್ಪಿನ ಚೂರಿನಿಂದಾದ ಒಂದು ಮುಚ್ಚಳವೂ ಉಂಟು. ನೀರುಗುಳ್ಳೆ ನಿರಪಾಯ ಸ್ಥಿತಿಗಳಲ್ಲಿ ತನ್ನ ಶರೀರವನ್ನು ಶಂಖದಿಂದ ಹೊರಚಾಚುತ್ತದೆ. ಆದರೆ ದೇಹದ ಬಹು ಭಾಗ ಮಾತ್ರ ಚಿಪ್ಪಿನ ಒಳಗೇ ಇರುತ್ತದೆ. ಹೊರಚಾಚಿದ ಭಾಗಗಳಲಿ, ಚೆನ್ನಾಗಿ ಬೆಳೆದ ತಲೆ, ಅದಕ್ಕೆ ಸಂಬಂಧಿಸಿದ ಸ್ಪರ್ಶತಂತುಗಳು ಮತ್ತು ಕಣ್ಣುಗಳು. ತಳಭಾಗದಲ್ಲಿ ಅಗಲವಾದ ಮಾಂಸಯುತವಾದ ಪಾದ-ಇವು ಕಂಡುಬರುತ್ತದೆ. ಪಾದದ ಸಹಾಯದಿಂದ ಈ ಪ್ರಾಣಿ ನಿಧಾನವಾಗಿ ತೆವಳುತ್ತದೆ. ಉಳಿದ ಭಾಗವೆಂದರೆ ಅಂಗಸ ಅಥವಾ ಕುಹರ (ವಿಸರ). ಈ ಭಾಗ ಶಂಖದ ಒಳಗೆ ಅದರ ಮೇಲ್ಭಾಗವನ್ನು ಆಕ್ರಮಿಸಿರುವುದಲ್ಲದೆ ಅದು ಕೂಡ ಶಂಖದಂತೆ ಸುರುಳಿ ಸುತ್ತಿಕೊಂಡಿದೆ. ಹೊರಚರ್ಮದ ಮಡಿಕೆ (ಮ್ಯಾಂಟಲ್) ಅಂಗಸವನ್ನೂ ಪೂರ್ಣವಾಗಿ ಆವರಿಸುವುದೇ ಅಲ್ಲದೆ, ಅದಕ್ಕೂ ಶರೀರಕ್ಕೂ ಮಧ್ಯೆ ಒಂದು ಅವಕಾಶವನ್ನು ಕಲ್ಪಿಸಿದೆ. ಇದಕ್ಕೆ ಹೊರ ಚರ್ಮದ ಅವಕಾಶವೆಂದು ಹೆಸರು. ಈ ಅವಕಾಶದ ಬಲಭಾಗದಲ್ಲಿ ಕಿವಿರುಗಳುಂಟು. ಕರುಳು, ಜನನೇಂದ್ರಿಯ ನಾಳ ಮತ್ತು ಶುದ್ಧೀಕರಣಾಂಗ ಇವುಗಳ ರಂಧ್ರಗಳು ತೆರೆಯುವುದು ಈ ಅವಕಾಶದಲ್ಲೇ. ನೀರುಗುಳ್ಳೆಯ ಹೊರದರ್ಮದ ಎಡಗಡೆ, ಅವಕಾಶದ ಗೋಡೆಗೆ ಸಂಬಂಧಿಸಿದಂತೆ ತೆಳುವಾದ ಒಂದು ಚೀಲವಿದೆ. ಇದೇ ಶ್ವಾಸಕೋಶ. ಈ ಪ್ರಾಣಿ ಭೂಮಿಯ ಮೇಲಾಗಲೀ ಕೊಚ್ಚೆ ನೀರಿನಲ್ಲಾಗಲೀ ಇದ್ದಾಗ ಈ ಶ್ವಾಸಕೋಶದ ಸಹಾಯದಿಂದ ಉಸಿರಾಡುತ್ತದೆ. ನೀರುಗುಳ್ಳೆಯ ಬಾಯ ಅಂಗಳದಲ್ಲಿ ನಾಲಗೆಯಂತಿರುವ ಒಂದು ಹಲ್ಲಿನ ಅಂಗವುಂಟು. ಇದಕ್ಕೆ ರ್ಯಾಡುಲ ಎಂದು ಹೆಸರು. ಆಹಾರವನ್ನು ಅಗಿಯಲು ಇದು ಅತ್ಯಗತ್ಯ.
(ಕೆ.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ